ಮಣ್ಣು ಕಂಬಗಳು -
	ಮಳೆಯ ನೀರಿನಿಂದ ಉಂಟಾಗುವ ಶಿಲಾಕ್ಷಯ ಪ್ರಕ್ರಮದ ಒಂದು ಹಂತದಲ್ಲಿಯ ರೂಪಣೆಗಳು (ಅರ್ತ್‍ಪಿಲ್ಲರ್ಸ್). ಶಿಲಾಸ್ತಂಭಗಳೆಂದು ಹೆಸರಿದೆ. ಮಳೆಯ ನೀರಿಗೆ ಕಲ್ಲನ್ನು ಸವೆಯಿಸಿ ಸಾಗಿಸುವ ವಿಶೇಷ ಸಾಮಥ್ರ್ಯವಿದೆ. ಈ ನೀರು ಭೂತಲದಲ್ಲಿರುವ ಮೇಲ್ಮಣ್ಣನ್ನೂ ಅಸಂಹತ ಶಿಲೆಳನ್ನೂ ಬಲು ಬೇಗ ಕೊಚ್ಚಿಕೊಂಡು ಹೋಗುತ್ತದೆ.  ಹಿಮನದಿಗಳು ದ್ರವಿಸಿ ಹಿಮ್ಮೆಟ್ಟಿದಂಥ ಸ್ಥಳಗಳಲ್ಲಿ ಚದರಿರುವ ಗಟ್ಟಿಕಲ್ಲಿನ ಬಂಡೆಗಳು ಅವುಗಳ ಕೆಳಗಿರುವ ಮೃದು ಮರಳಿನ ಮತ್ತು ಮಣ್ಣಿನ ಶಿಲೆಗಳ ಪದರಗಳನ್ನು ಸವೆಯದಂತೆ ಕೊಂಚ ಕಾಲದ ತನಕ ರಕ್ಷಿಸುತ್ತವೆ. ಉದಾಹರಣೆಗೆ, ಇಸ್ರೇಲ್ ಮತ್ತು ಜಾರ್ಡನ್ ದೇಶಗಳ ನಡುವೆ ಇರುವ ಡೆಡ್‍ಸೀ ಎಂಬ ಸರೋವರದ ಬಳಿ ಜಾಳಾದ ಮತ್ತು ಸುಲಭವಾಗಿ ಪುಡಿ ಪುಡಿಯಾಗುವಂಥ ಮಣ್ಣಿನ ಮೇಲೆ ಗಟ್ಟಿಕಲ್ಲಿನ ಹೊದಿಕೆ ಇದೆ. ಈ ಶಿಲಾಕವಚವಾದರೂ ಅದರ ಅಡಿಯಲ್ಲಿಯ ಮೃದುಶಿಲೆಗಳನ್ನು ಛತ್ರಿಯಂತೆ ಇಲ್ಲವೆ ಭೋವೆಯಂತೆ ಮಳೆಯ ನೀರಿನ ಹಾವಳಿಯಿಂದ ರಕ್ಷಿಸುತ್ತದೆ. ಮೇಲೆ ಇರುವ ಗಟ್ಟಿಕಲ್ಲಿನಲ್ಲಿಯ ಬಿರುಕುಗಳ ಮೂಲಕ ಇಳಿದು ಹರಿಯುವ ಮಳೆಯನೀರು ಕೆಳಗಿನ ಮೃದುಶಿಲೆಗಳ ಕಣಗಳನ್ನು ಸಡಲಿಸಿ ಬೇರೆ ಕಡೆಗೆ ಸಾಗಿಸುತ್ತದೆ. ಹೀಗಾಗಿ ಮೃದುಮಣ್ಣಿನ ಮತ್ತು ಕಲ್ಲಿನ ಅನೇಕ ತೆಳ್ಳನೆಯ ಕಂಬಗಳು ಅಲ್ಲಲ್ಲಿ ನಿರ್ಮಾಣಗೊಳ್ಳುತ್ತವೆ. ಶಿಲಾಕ್ಷಯ ಮುಂದುವರಿದಂತೆಲ್ಲ ಈ ಕಂಬಗಳೂ ಸವೆದು ಗಾತ್ರದಲ್ಲಿ ಚಿಕ್ಕದಾಗುತ್ತ ಹೋಗಿ ಕಾಲಕ್ರಮದಲ್ಲಿ ಇವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಂತಿಮವಾಗಿ ಎಲ್ಲ ಕಂಬಗಳೂ ಅದೃಶ್ಯವಾಗುತ್ತವೆ. 

	ಗಟ್ಟಿಕಲ್ಲಿನ ಹೊದಿಕೆಯ ಬದಲಿಗೆ ಒಂದು ಮರವೊ ಬೇರೆ ಸಸ್ಯರಾಶಿಯೊ ಆ ಹೊದಿಕೆಯ ಕೆಳಗಿರುವ ಮೃದುಶಿಲೆಗಳನ್ನು ಸಂರಕ್ಷಿಸಬಹುದು. ಸ್ಕಾಟ್ಲೆಂಡಿನ ಟೈರಾಲ್ ಆಲ್ಪ್ಸ್, ರಾಕೀ ಪರ್ವತಗಳು ಮತ್ತು ಏಷ್ಯಖಂಡದ ನಾನಾ ಪ್ರದೇಶಗಳಲ್ಲಿ ಇಂಥ ಮಣ್ಣು ಕಂಬಗಳು ಕಾಣಬರುತ್ತವೆ. ಕೆಲವೆಡೆ ಇವುಗಳ ಎತ್ತರ 180 ಮೀ. ಗಿಂತಲೂ ಹೆಚ್ಚಿರುತ್ತದೆ. 

	ಉತ್ತರ ಅಮೆರಿಕದ ಪಶ್ಚಿಮ ಭಾಗದಲ್ಲಿ ಬ್ಲಾಕ್‍ಹಿಲ್ಸ್ ಪ್ರದೇಶದ ಸಮೀಪದಲ್ಲಿ ವಿಶಾಲ ಪಾಳು ಭೂಮಿ (ಬಂಜರುನೆಲ) ಇದೆ. ಇಲ್ಲಿ ಮರಳು ಮತ್ತು ಜೇಡಿಕಲ್ಲುಗಳೊಡನೆ ಗಟ್ಟಿಯಾಗದೇ ಉಳಿದಿರುವ ಮಣ್ಣಿನ ಪದರಗಳಿವೆ. ಇಲ್ಲಿಯ ವಾಯುಗುಣ ಅರ್ಧ ಬೆಂಗಾಡಿನಲ್ಲಿ ಇರುವಂತೆಯೂ ಅರ್ಧಮರುಭೂಮಿಯಲ್ಲಿ ಇರುವಂತೆಯೂ ಇದೆ. ವರ್ಷದ ಯಾವುದೋ ಅವಧಿಯಲ್ಲಿ ಕೆಲವು ವೇಳೆ ಮಳೆ ಬಲುರಭಸದಿಂದ ಬೀಳುತ್ತದೆ. ಇಂಥ ಪಾಳು ಭೂಮಿಗಳಲ್ಲಿ ನೀರಿನಿಂದ ಆಗುವ ಸವೆತ ಹೆಚ್ಚಾಗಿರುವುದರಿಂದ ಸಾಮಾನ್ಯವಾಗಿ ಮಣ್ಣು ಕಂಬಗಳು ಕಾಣಸಿಗುತ್ತವೆ. 

	ತುರ್ಕಿಯಲ್ಲಿರುವ ಮಣ್ಣಿನ ಕಂಬಗಳು ಜ್ವಾಲಾಮುಖಿಯ ಬೂದಿಯಿಂದ ಮತ್ತು ಸಡಿಲಗೊಂಡಶಿಲೆಗಳಿಂದ ನಿರ್ಮಿತವಾಗಿವೆ. ಮಣ್ಣುಕಂಬಗಳು ಮಳೆ ನೀರಿನಿಂದ ಆಗುವ ಶಿಲಾಕ್ಷಯದ ಪರಿಣಾಮಕಾರೀ ದೃಷ್ಟಾಂತಗಳು.
(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ